ಪಾರಂಪರಿಕ ತಿಳಿವಳಿಕೆಯ ಆಕರಗಳು
ಕನ್ನಡದ ಸಂಕಲನ ಗ್ರಂಥಗಳು

ಕನ್ನಡ ಸಾಹಿತ್ಯದ ಪ್ರಾಚೀನತೆಯನ್ನು ನಿರ್ಧರಿಸಲು ಅನೇಕ ಪ್ರಾಚೀನ ಕೃತಿಗಳು ಇದುವರೆಗೆ ಸಿಕ್ಕದೆ ಇರುವುದರಿಂದ ಬಹಳ ತೊಂದರೆಯಾಗಿದೆ. ಕವಿರಾಜಮಾರ್ಗವೂ ಸೇರಿದಂತೆ ಹಲವು ಕೃತಿಗಳಲ್ಲಿ ಇಂತಹ ಪುಸ್ತಕಗಳನ್ನು ಮತ್ತು ಲೇಖಕರನ್ನು ಹೆಸರಿಸಲಾಗಿದೆ. ಆದರೆ, ಅವುಗಳ ಪಠ್ಯವು ದೊರಕಿಲ್ಲ. ಿಂತಹ ಸನ್ನಿವೇಶದಲ್ಲಿ ನಗೆ ಸಂಕಲನ ಗ್ರಂಥಗಳು ಸ್ವಲ್ಪ ಮಟ್ಟಿಗೆ ನೆರವು ನೀಡುತ್ತವೆ. ಈ ಸಂಕಲನಕಾರರು ಅಪಾರ ಶ್ರಮ ವಹಿಸಿ, ತಮ್ಮ ಕಾಲದಲ್ಲಿ ದೊರಕುತ್ತಿದ್ದ ಅನೇಕ ಕೃತಿಗಳನ್ನು ತಮಗೆ ಇಷ್ಟವಾದ ಉಲ್ಲೇಖಗಳನ್ನು ಆರಿಸಿ, ಸಂಗ್ರಹಿಸಿದ್ದಾರೆ. ಇವರು ಮಾಡಿರುವ ಆಯ್ಕೆಗಳು ಪರೋಕ್ಷವಾಗಿ ಆ ಕಾಲದ ಸಾಹಿತ್ಯಕ ಅಭಿರುಚಿಗಳಿಗೆ ಕನ್ನಡಿ ಹಿಡಿಯುತ್ತವೆ. ಈ ಸಂಕಲನಕಾರರು ತಾವು ಆರಿಸಿಕೊಂಡಿರುವ ಉದ್ಧರಣೆಗಳಿಗೆ ಮೂಲಗಳನ್ನು ಹೇಳಿದ್ದರೆ, ಆಗ ಸಾಹಿತ್ಯಚರಿತ್ರೆಯ ಪುನಾರಚನೆಗೂ ಸಹಾಯವಾಗುತ್ತದೆ. ಹೀಗೆ ಬೇರೆ ಬೇರೆ ಕಾಲಗಳಲ್ಲಿ ರಚಿತವಾಗಿರುವ ಸಂಕಲನ ಗ್ರಂಥಗಳನ್ನು ಆಧುನಿಕ ವಿದ್ವಾಂಸರು, ಸಂಪಾದಿಸಿ ಪ್ರಕಟಿಸಿದ್ದಾರೆ. ಈ ಟಿಪ್ಪಣಿಯು ಅಂತಹ ಸಂಕಲನಗ್ರಂಥಗಳ ಪರಿಚಯ ಮಾಡಿಕೊಡುತ್ತದೆ.

  1. ಸೂಕ್ತಿಸುಧಾರ್ಣವ, ಮಲ್ಲಿಕಾರ್ಜುನ, ಕ್ರಿ.ಶ. 1240, ಇದನ್ನು ಎನ್. ಅನಂತರಂಗಾಚಾರ್ ಅವರು ಸಂಪಾದಿಸಿ, 1947 ರಲ್ಲಿ ಹೊರತಂದರು.ಇದು ಮೈಸೂರಿನ ಗೌರ್ನಮೆಂಟ್ ಓರಿಯೆಂಟಲ್ ಲೈಬ್ರರಿಯಿಂದ ಪ್ರಕಟವಾಯಿತು. ಇದರಲ್ಲಿ ಪೀಠಿಕಾಪ್ರಕರಣವೂ ಸೇರಿದಂತೆ ಒಟ್ಟು ಹತ್ತೊಂಬತ್ತು ಅಧ್ಯಾಯಗಳಿವೆ. ಅವುಗಳಲ್ಲಿ 2200 ಪದ್ಯಭಾಗಗಳಿವೆ. ಕಾವ್ಯಭಾಗಗಳ ವರ್ಗೀಕರಣಕ್ಕೆ ಬಳಸಿರುವ ಮಾನದಂಡವೆಂದರೆ, ಅಷ್ಟಾದಶ ವರ್ಣನೆಗಳು. ಹದಿನೆಂಟು ವರ್ಣನೆಗಳಿಗೆ ಹದಿನೆಂಟು ಅಧ್ಯಾಯಗಳನ್ನು ಮೀಸಲಿಡಲಾಗಿದೆ. ಮಲ್ಲಿಕಾರ್ಜುನನು ಈ ಪದ್ಯಗಳ ಮೂಲವನ್ನು ಹೆಸರಿಸಿಲ್ಲ.
  2. ಕಾವ್ಯಸಾರ, ಅಭಿನವ ವಾದಿವಿದ್ಯಾನಂದ, ಕ್ರಿ.ಶ. 1500. ಇದು 1898 ರಲ್ಲಿ ಮೈಸೂರಿನ ಕರ್ನಾಟಕ ಕಾವ್ಯಮಂಜರಿ ಮಾಲೆಯಲ್ಲಿ ಪ್ರಕಟವಾಯಿತು. ಇದನ್ನು ಸಂಪಾದಿಸಿದವರು ಎಸ.ಜಿ.ನರಸಿಂಹಾಚಾರ್ ಮತ್ತು ಎಂ.ಎ. ರಾಮಾನುಜ ಅಯ್ಯಂಗಾರ್
  3. ಕಾವ್ಯಸಾರ, ಮಲ್ಲ ಕವಿ, ಇದು 1973 ರಲ್ಲಿ ಕನ್ನಡ ಸಾಹಿತ್ಯಪರಿಷತ್ತಿನಿಂದ ಪ್ರಕಟವಾಯಿತು. ಸಂಪಾದಕರು ಎನ್. ಅನಂತರಂಗಾಚಾರ್. ಇದರಲ್ಲಿ ಸುಮಾರು 4000 ಪದ್ಯಗಳಿವೆ.
  4. ನೀತಿಸಾರೋದಯ, ಸಂಕಲಕಾರನ ಹೆಸರು ಗೊತ್ತಿಲ್ಲ. ಬಿ.ಎಸ್.ಸಣ್ಣಯ್ಯನವರು ತಮಗೆ ಸಿಕ್ಕಿದ ಒಂದೇ ಒಂದು ಹಸ್ತಪ್ರತಿಯನ್ನು ಬಳಸಿಕೊಂಡು ಇದನ್ನು ಸಂಪಾದಿಸಿದ್ದಾರೆ. ಇದು 1985 ರಲ್ಲಿ ಪ್ರಬುದ್ಧ ಕರ್ನಾಟಕದಲ್ಲಿ ಪ್ರಕಟವಾಯಿತು.(ಸಂಪುಟ 66, ಸಂಚಿಕೆ 4 ಮತ್ತು ಸಂಪುಟ 68 ಸಂಚಿಕೆ 1) ಇದರಲ್ಲಿ ಸುಮಾರು 250 ಪದ್ಯಗಳಿವೆ. ಅವು ಚಂಪೂ ಪ್ರಕಾರದಲ್ಲಿ ಕಂದಪದ್ಯಗಳಲ್ಲಿ ರಚಿತವಾಗಿವೆ.
  5. ವಾವೆ ಮತ್ತು ಗಟ್ಟಿ ಪದಗಳು, ಸಂಕಲನಕಾರನ ಹೆಸರು ಗೊತ್ತಿಲ್ಲ. ಸಂಪಾದಿಸಿದವರು ಜಿ.ಜಿ.ಮಂಜುನಾಥನ್. 1986 ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನಸಂಸ್ಥೆಯಿಂದ ಪ್ರಕಟವಾಯಿತು. ಇದರಲ್ಲಿ ವೀರಶೈವ ಕಾವ್ಯಗಳಿಂದ ಆರಿಸಿ ತೆಗೆದ 101 ಪದ್ಯರೂಪದ ಒಗಟುಗಳನ್ನು ಸಂಕಲನ ಮಾಡಿದ್ದಾರೆ. ಒಂದೇ ಒಂದು ಒಗಟನ್ನು ಕುಮಾರವ್ಯಾಸ ಭಾರತದಿಂದ ತೆಗೆದು ಕೊಡಲಾಗಿದೆ.

ಈ ಸಂಕಲನಗ್ರಂಥಗಳು ಕೃತಿಗಳು ಮತ್ತು ಕವಿಗಳನ್ನು ಗುರುತಿಸಲು ಹಾಗೂ ಅವರ ಕಾಲನಿರ್ಣಯ ಮಾಡಲು ಸಹಾಯವಾಗುತ್ತವೆ.

ಮುಖಪುಟ / ಪಾರಂಪರಿಕ ತಿಳಿವಳಿಕೆಯ ಆಕರಗಳು